How to Save Money in Home: ಹೊಸ ಮನೆ ಖರೀದಿಸಿ, ಇಂಟೀರಿಯರ್ ವಿನ್ಯಾಸ ಮಾಡಿದ ಬಳಿಕ ಬಹುತೇಕರ ಕಿಸೆ ಖಾಲಿಯಾಗಿರುತ್ತದೆ. ಹೊಸ ಮನೆಯಲ್ಲಿ ನೆಲೆಸಲು ಆರಂಭಿಸಿದ ಬಳಿಕ ಹಣಕ್ಕೆ ತತ್ವಾರವಾಗಬಹುದು. ಇಂತಹ ಸಂದರ್ಭದಲ್ಲಿ ಮನೆ ನಿರ್ವಹಣೆಯಲ್ಲಿ ಹಣ ಉಳಿತಾಯ ಮಾಡುವ ಕಲೆ ಕಲಿತರೆ ಯಾವುದೇ ಸಮಸ್ಯೆಯಾಗದು.
ಮನೆ ನಿರ್ಮಾಣವು ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇದು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಬಯಸುವ ನಿರ್ಧಾರವೂ ಹೌದು. ನಿವೇಶನ ಖರೀದಿಸಿ ಮನೆ ಕಟ್ಟಲು ಅಥವಾ ಸಿದ್ಧವಾಗಿರುವ ಅಪಾರ್ಟ್‌ಮೆಂಟ್ ಖರೀದಿಸಲು ಹತ್ತು ಹಲವು ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಬ್ಯಾಂಕ್‌ನಿಂದ ಗೃಹಸಾಲ ಸಿಕ್ಕರೂ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ, ಇಂಟೀರಿಯರ್ ಡಿಸೈನ್ ಎಂದೆಲ್ಲ ಹಲವು ಲಕ್ಷ ರೂ. ಖರ್ಚು ಮಾಡಿ ಉಳಿತಾಯದ ಮೊತ್ತವನ್ನೆಲ್ಲ ಖಾಲಿ ಮಾಡಬೇಕಾಗುತ್ತದೆ. ಪ್ರತಿತಿಂಗಳು ಇಎಂಐ ಕಟ್ಟುವ ತಾಪತ್ರಯವೂ ಇರುತ್ತದೆ. ಉತ್ತಮ ಆದಾಯದ ಮೂಲ ಇರುವವರಿಗೆ ಇದು ಅಂತಹ ಪರಿಣಾಮವೇನೂ ಬೀರದು. ನಿರ್ದಿಷ್ಟ ವೇತನ ಪಡೆದು ಅದರಲ್ಲಿಯೇ ಮಕ್ಕಳ ಶಾಲಾ ಖರ್ಚು, ಮನೆಯ ಖರ್ಚು, ಪೆಟ್ರೋಲ್ ಖರ್ಚು ಎಂದೆಲ್ಲ ಅಡ್ಜೆಸ್ಟ್ ಮಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಪ್ರತಿಯೊಂದು ರೂಪಾಯಿಯ ಮಹತ್ವವೂ ಅರಿವಾಗಿರುತ್ತದೆ.
ಈಗ ಹಣದುಬ್ಬರವೂ ಹೆಚ್ಚಾಗಿದೆ, ಪೆಟ್ರೋಲ್ ದರವೂ ಹೆಚ್ಚಾಗಿದೆ, ಅಡುಗೆ ಅನಿಲ ದರವೂ ಮೊದಲಿನಂತಿಲ್ಲ. ಹೊಸ ಮನೆ ಖರೀದಿಸಿದವರು ಮಾತ್ರವಲ್ಲದೆ ಹಳೆ ಮನೆಯಲ್ಲಿರುವವರಿಗೂ ದಿನನಿತ್ಯದ ಖರ್ಚುವೆಚ್ಚಗಳನ್ನು ಸರಿದೂಗಿಸುವುದು ಕಷ್ಟವಾಗಿರಬಹುದು. ಇಂತಹ ಸಮಯದಲ್ಲಿ ದಿನನಿತ್ಯದ ಖರ್ಚಿನಲ್ಲೇ ಹಣ ಉಳಿಸಲು ಸಾಕಷ್ಟು ಮಾರ್ಗಗಳಿವೆ. ಅಂತಹ ಕೆಲವು ಹಣ ಉಳಿಸುವ ದಾರಿಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಹಣ ಉಳಿತಾಯ ಮಾಡುವುದು ಹೇಗೆ
ಹಸಿರು ಬೆಳೆಸಿ
ಬಾಲ್ಕನಿ ಅಥವಾ ಮನೆಯ ಹೊರಭಾಗದಲ್ಲಿ ಔಷಧೀಯ ಗಿಡಗಳನ್ನು ಬೆಳೆಸಿ. ಅವಕಾಶವಿದ್ದರೆ ತರಕಾರಿಗಳನ್ನೂ ಬೆಳೆಸಿ. ಔಷಧ ಗಿಡಗಳನ್ನು ಅವಶ್ಯಕತೆಯಿದ್ದಾಗ ಬಳಸಿ. ಇದರಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ. ಆಸ್ಪತ್ರೆ ಖರ್ಚು ಕಡಿಮೆಯಾಗುತ್ತದೆ.
ಆಹಾರ ವ್ಯರ್ಥ ಮಾಡಬೇಡಿ
ಮನೆಯ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಅವಶ್ಯವಿರುವಷ್ಟು ಆಹಾರ ಸಿದ್ಧಪಡಿಸಿ. ಆಹಾರ ಉಳಿದರೆ ಬಿಸಾಕಬೇಡಿ. ತರಕಾರಿ ಅಗತ್ಯವಿರುವಷ್ಟು ಮಾತ್ರ ತನ್ನಿ.
ವಿದ್ಯುತ್ ಬಿಲ್‌ನಲ್ಲಿ ಉಳಿತಾಯ
ಕೆಲವು ಫ್ರಿಡ್ಜ್‌ಗಳು ಅಧಿಕ ವಿದ್ಯುತ್ ಬಳಸುತ್ತವೆ. ದಿನದಲ್ಲಿ ಕೆಲವು ಗಂಟೆಗಳ ಕಾಲ ಫ್ರಿಡ್ಜ್ ಆಫ್ ಮಾಡಿ. ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ. ನೋಡುವವರು ಇಲ್ಲದೆ ಇರುವಾಗ ಟೀವಿ ಆನ್ ಇಡುವುದು ಬೇಡ. ಅನಗತ್ಯವಾಗಿ ಫ್ಯಾನ್, ವಿದ್ಯುತ್ ದೀಪಗಳನ್ನು ಉರಿಸಬೇಡಿ. ವಾಷಿಂಗ್ ಮೆಷಿನ್‌ಗೆ ಸಾಕಾಗುವಷ್ಟು ಡ್ರೆಸ್‌ಗಳಿದ್ದರೆ ಮಾತ್ರ ವಾಷ್ ಮಾಡಿ. ಒಂದೆರಡು ಬಟ್ಟೆಗಳನ್ನು ವಾಷ್ ಮಾಡಲು ವಾಷಿಂಗ್ ಮೆಷಿನ್ ಬಳಸಬೇಡಿ. ಕೈಯಲ್ಲಿಯೂ ಕೆಲವು ಬಟ್ಟೆಗಳನ್ನು ವಾಷ್ ಮಾಡಬಹುದು. ವಿದ್ಯುತ್ ಹೆಚ್ಚು ಬಳಸದ ಬಲ್ಬ್ಗಳನ್ನು ಬಳಸಿ. ಬಿಸಿ ನೀರಿನ ಗೀಸರ್‌ಗಳನ್ನು ಹೆಚ್ಚು ಹೊತ್ತು ಆನ್ ಮಾಡಬೇಡಿ. ಅವಶ್ಯಕತೆ ಇರುವಷ್ಟು ಹೊತ್ತು ಮಾತ್ರ ಆನ್ ಮಾಡಿ.
ಇದನ್ನು ಓದಿ: What is IPO?: ಆರಂಭಿಕ ಷೇರು ವಿತರಣೆ ಎಂದರೇನು? ಐಪಿಒದಲ್ಲಿ ಹೂಡಿಕೆ ಮಾಡುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು?
ಶಾಪಿಂಗ್‌ಗೆ ಕಡಿವಾಣ
ಹೆಚ್ಚು ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಬೇಡಿ. ಮನೆಯಲ್ಲಿ ಒಂದೆರಡು ವಸ್ತುಗಳು ಮುಗಿದಿದ್ದರೆ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಹೋಗಬೇಡಿ, ಮನೆಯ ಹತ್ತಿರದ ಅಂಗಡಿಯಲ್ಲಿ ಖರೀದಿಸಿ. ಶಾಪಿಂಗ್ ಕಾಂಪ್ಲೆಕ್ಸ್‌ಗೆ ಒಂದೆರಡು ವಸ್ತು ಖರೀದಿಗೆ ಹೋದರೆ, ಬರುವಾಗ ಬಾಸ್ಕೆಟ್ ಫುಲ್ ಐಟಂಗಳು ಇರುತ್ತದೆ.
ಮನೆಯ ಆಯವ್ಯಯ
ಪ್ರತಿತಿಂಗಳು ಮನೆಗಾಗಿ ಎಷ್ಟು ಹಣ ಖರ್ಚು ಮಾಡಬೇಕು ಎಂದು ಆಯವ್ಯಯ ಪಟ್ಟಿ ರಚಿಸಿ. ಹಿಂದಿನ ತಿಂಗಳು ಅನಗತ್ಯ ಖರ್ಚುಗಳು ಯಾವುವು ಎಂದು ತಿಳಿಯಿರಿ. ಈ ರೀತಿಯ ಆಯವ್ಯಯ ಪಟ್ಟಿಯಿಂದ ಹಣ ಉಳಿತಾಯ ಮಾಡುವ ಅವಕಾಶಗಳ ಕುರಿತು ಹೆಚ್ಚು ಸ್ಪಷ್ಟತೆ ದೊರಕುತ್ತದೆ.
ಅಗತ್ಯವಿದ್ದರೆ ಮಾತ್ರ ವಾಹನ ಬಳಸಿ
ಮನೆಯ ಹತ್ತಿರದಲ್ಲಿರುವ ಅಂಗಡಿಗೆ ಹೋಗಲು ಬೈಕ್ ಅಥವಾ ಕಾರ್ ಬಳಸಬೇಡಿ. ಒಬ್ಬರೇ ದೂರ ಪ್ರಯಾಣ ಮಾಡುವುದಾದರೆ ಕಾರಿನ ಬದಲು ಸಾರ್ವಜನಿಕ ಸಾರಿಗೆ ಬಳಸಿ. ಈಗ ಪೆಟ್ರೋಲ್/ಡೀಸೆಲ್ ದರ ದುಬಾರಿಯಾಗಿದ್ದು, ಸ್ವಂತ ವಾಹನ ಬಳಕೆಗೆ ಕಡಿವಾಣ ಅಗತ್ಯ. ಈಗ ಎಲೆಕ್ಟ್ರಿಕ್ ಬೈಕ್‌ಗಳ ಬಳಕೆ ಹೆಚ್ಚಿದ್ದು, ಇದರಿಂದಲೂ ಪೆಟ್ರೋಲ್ ಹಣ ಉಳಿಸಬಹುದು.
ಅನ್‌ಸಬ್‌ಸ್ಕ್ರೈಬ್ ಆಗಿ
ಸಿನಿಮಾ ನೋಡಲು ಸಮಯವಿಲ್ಲದೆ ಇದ್ದರೂ ನೆಟ್‌ಫ್ಲಿಕ್ಸ್, ಪ್ರೈಮ್, ಝೀ ಫೈವ್ ಎಂದು ಹಲವು ಬಗೆಯ ಒಟಿಟಿಗಳಿಗೆ ಚಂದಾದಾರರಾಗಿರಬಹುದು. ಇವುಗಳನ್ನು ಕಳೆದ ಹಲವು ತಿಂಗಳಲ್ಲಿ ಎಷ್ಟು ಬಳಸಿದ್ದೀರಿ ಎಂದು ಪರಿಶೀಲಿಸಿ. ಬಳಸದೆ ಇದ್ದ ಇಂತಹ ಸೇವೆಗಳನ್ನು ಅನ್‌ಸಬ್‌ಸ್ಕ್ರೈಬ್ ಆಗಿ. ದಿನಾ ಟೀವಿ ಮುಂದೆ ಇರುವ ಬದಲು ಹೊರಗೆ ವಾಕಿಂಗ್ ಹೋಗಿ. ಸ್ನೇಹಿತರ ಜೊತೆ ಹೊರಾಂಗಣ ಕ್ರೀಡೆಗಳನ್ನು ಆಡಿ.
ಖರೀದಿ ಸಮಯದಲ್ಲಿ ಎಚ್ಚರ
ಅಗತ್ಯ ವಸ್ತುಗಳನ್ನು ಖರೀದಿಸುವಾಗ ಗುಣಮಟ್ಟಕ್ಕೆ ಆದ್ಯತೆ ನೀಡಿ. ದೀರ್ಘಬಾಳ್ವಿಕೆ ಬರುವ ವಸ್ತುಗಳಿಂದ ಅನಗತ್ಯ ಖರ್ಚುವೆಚ್ಚಗಳು ಕಡಿಮೆಯಾಗುತ್ತವೆ.
ಉಳಿತಾಯ ಮಾಡಲು ಪ್ರಯತ್ನಿಸಿ
ಸೇವ್ ಫಸ್ಟ್, ಸ್ಪೆಂಡ್ ಲೇಟರ್ ಎಂಬ ಮಾತಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಆದಾಯದಲ್ಲಿ ಒಂದಿಷ್ಟು ಮೊತ್ತ ಉಳಿತಾಯ ಮಾಡಿ. ಸಂಬಳ ಪೂರ್ತಿ ಖರ್ಚು ಮಾಡುವ ಧಾವಂತ ಬೇಡ.
ಇದನ್ನೂ ಓದಿ: ಷೇರುಪೇಟೆ ಮಾರ್ಗದರ್ಶಿ ಲೇಖನಗಳು